ಅಂಕೋಲೆ – 4

ಸಾಮಾನ್ಯ

ಸ್ಸಿಳಿದರೆ ಸದ್ದಿನ ಕಾಡು
ಹೊಳೆ ದಾಟಿ ಗೊತ್ತಿದ್ದ ಹುಡುಗ ನಡುರಸ್ತೆಯಲ್ಲೇ
ಕಕ್ಕಾಬಿಕ್ಕಿಯಾಗುವುದೊಂದು ಬಾಕಿ
ಅಪ್ಪ ಕೈಹಿಡಿದು ನಡೆಸಿದ

ಈ ಆಳ ಅಗಲ
ನಿಲುಕುತ್ತಿಲ್ಲ
ಹೊಸ ಚಿಂತೆಗೆ ಸಿಕ್ಕಿಬಿದ್ದವ ನೋಡುತ್ತಾನೆ
ಅಪ್ಪ ಹೊಟೇಲೊಳಗೆ ಕರೆತಂದು ನಿಲ್ಲಿಸಿದ್ದಾನೆ

ಪ್ಲೇಟು ಕಪ್ಪು ಬಸಿಗಳ ಸದ್ದು ಕಿವಿಗೆ ಬಿದ್ದು
ಜೀರುಂಡೆ ಹಾಡ ತೇವದ ಲಯ ಹಿಡಿದು
ದಾರಿ ಕಂಡವನೊಳಗೆ ಉಮೇದು

ಮೂಗಿಗಡರಿ ಆಸೆಯರಳಿಸುತ್ತದೆ ಪರಿಮಳ
ಟೇಬಲ್ಲಿನ ಮುಂದೆ ಆಗಲೇ ಕೂತಿದ್ದ ಅಪ್ಪ
ಕೈ ಹಿಡಿದು ಎಳೆಯುತ್ತಿದ್ದಾನೆ

ಕೂತರೆ ಎದುರಿಗೆ ತಿಂಡಿಯ ಪ್ಲೇಟು
ತಿನ್ನುತ್ತ ತಿನ್ನುತ್ತ ದೃಷ್ಟಿ ಹರಿಯುತ್ತದೆ ಅಪ್ಪನೆಡೆಗೆ
ಅಪ್ಪನ ಕಣ್ಣಲ್ಲೂ ಮಗನೇ

ತಿನ್ನುತ್ತ ತಿನ್ನುತ್ತ ಆಸೆ ಹುಡುಗನಿಗೆ
ಕೇಳಬೇಕು; ಕೇಳಲಾರ
ಸಂಕೋಚವನ್ನೂ ಮೀರಿದ ಎಂಥದೋ ಸಂಕಟ

ಅಷ್ಟರಲ್ಲೇ ಅಪ್ಪ ಆರ್ಡರು ಮಾಡಿಯೇಬಿಟ್ಟ:
“ಮತ್ತೊಂದು ಬಟಾಡೆ ವಡಾ ತಾ”

ವೆಂಕಟ್ರಮಣ ಗೌಡ

ಈ ಘಳಿಗೆ

ಸಾಮಾನ್ಯ

ಹೆಬ್ಬಾಗಿಲಿಗೆ ಬಂದು ದಾರಿಗಳು ಕಾದಿವೆ
ಯಾರಿದ್ದೀರಿ ಊರೊಳಗೆ?

ಅರಳಿಕಟ್ಟೆಗಳೆಲ್ಲ ಮಾತಿಗಾಗಿ ತವಕಿಸಿವೆ
ಯಾರಿಗಿದೆ ಪುರುಸೊತ್ತು?

ಪಂಜರದ ಗಿಣಿಗಳು ವಟಗುಟ್ಟುತ್ತಲೇ ಇವೆ
ಅರ್ಥ ಬಲ್ಲವರಿದ್ದರೆ ಹೀಗೆ ಬನ್ನಿ

ಧೋ… ಎಂದು ಸುರಿಯುತ್ತಿದ್ದ ಮಳೆ ನಿಂತು
ಎಲ್ಲ ನಿಶ್ಶಬ್ದ. ಕೇಳಿಸುತ್ತಿದೆಯೇ ಹಾಡು?

ನಕ್ಷತ್ರಗಳು ಮಿನುಗುತ್ತ ಆಕಾಶ ಇಳಿದಿದೆ ಭೂಮಿಗೆ
ಚಂದಿರನ ಕೇಳುತ್ತ ನಿದ್ದೆಹೋದ ಮಗು ಮುಗುಳ್ನಗೆ

ಈ ಘಳಿಗೆ ಹೀಗೆ; ಚಾಚಿಕೊಂಡು ಆಚೆಗೆ

ವೆಂಕಟ್ರಮಣ ಗೌಡ

ಗಟ್ಟಿಗಿತ್ತಿ

ಸಾಮಾನ್ಯ

ನ್ನೊಂದು ಕೂದಲೆಳೆಯಿಂದಲೇ
ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು
ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು

ಈ ಗಟ್ಟಿಗಿತ್ತಿಯ ಕತೆ
ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು
ಪೊದೆಮೀಸೆಯ ಅಜ್ಜ ಹೂಂಕರಿಸಿದರೆ
ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು

ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ
ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ
ತರಗೆಲೆಯಂತೆ ತೂರಿಹೋಗುತ್ತಿದ್ದ
ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು

ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ?
ನಾವು ಮಕ್ಕಳು ಬಿಡಿ, ದೊಡ್ಡವರಿಗೂ ಗೊತ್ತಿರಲಿಲ್ಲ ಉತ್ತರ
ಯಾರೂ ತತ್ತರಿಸುವಂತಿರುತ್ತಿತ್ತು ಎದುರಿಗಿದ್ದವರನ್ನು ಸದೆಬಡಿವಂಥ ಮಾತಿನ
ಅಜ್ಜಿಯ ನಿರ್ದಾಕ್ಷಿಣ್ಯ ಆಕ್ರಮಣ

ಅಜ್ಜ ಕುಂತರೂ ನಿಂತರೂ ಜಗಳ ಕಾಯಲು
ಅಲ್ಲೊಂದು ನೆವವಿರುತ್ತಿತ್ತು ಅಜ್ಜಿಗೆ
ಅದೇ ಅಜ್ಜಿ ತಾನೆಷ್ಟೇ ಹಂಗಿಸಿ ಬೈದುಕೊಂಡರೂ
ಮತ್ತಾರದೋ ಬಾಯಲ್ಲಿ ಅಜ್ಜ ಸಲೀಸಾಗಲು
ಬಿಟ್ಟವಳಲ್ಲ ಕಡೆಯವರೆಗೆ

ಎದುರಲ್ಲಿದ್ದರೆ ಕಾಲು ಕೆದರಿ ಜಗಳ
ಅಜ್ಜನ ಬೆನ್ನಲ್ಲಿ ಮಾತ್ರ ಅಭಿಮಾನ
ದ ಪಲ್ಲಕ್ಕಿಗೆ ಹೆಗಲು
ಜಗಳದ ಧಗೆ ಕಾಯುತ್ತಲೇ ಅಜ್ಜನನ್ನು
ಎದೆಯೊಳಗೆ ಮಡಗಿಕೊಂಡಳು
ಹಗಲೂ ಇರುಳೂ

ಅನ್ನಿಸುತ್ತದೆ ಈಗ ಕೂತು ಯೋಚಿಸುವಾಗ:
ಅಜ್ಜನ ಕತೆಯ ಗಟ್ಟಿಗಿತ್ತಿ ಅಜ್ಜಿಯೇ ಆಗಿದ್ದಳು
ಅಜ್ಜ ಸತ್ತ ಬೆನ್ನಲ್ಲೇ ದಿನವೆಣಿಸಲಾರದವಳಂತೆ ಜಗಳವಿಲ್ಲದೆ
ದಣಿವಿನಲ್ಲಿ ಗೊಣಗುಟ್ಟುತ್ತಲೇ ನಿಶ್ಶಬ್ದವಾದವಳು

ವೆಂಕಟ್ರಮಣ ಗೌಡ

ಅಂಕೋಲೆ – 3

ಸಾಮಾನ್ಯ

ಸಿಕ್ಕೇಬಿಟ್ಟಿತು ಅಂಕೋಲೆ ಎನ್ನುವಾಗಲೂ
ಎಷ್ಟೊಂದು ರಂಪಾಟ ಎಷ್ಟೊಂದು ಕಣ್ಣೀರು

ಹೊರಡುವ ಹಿಂದಿನ ದಿನ ಸಂಜೆ
ಗದ್ದಲವೋ ಗದ್ದಲ ಹಾಳು
ದೊಗಲೆ ಚಡ್ಡಿಯ ದೆಸೆಯಿಂದ

ಅಪ್ಪ ಹೊಲಿಸಿ ತಂದಾಗ ಉಕ್ಕಿದ್ದ ಖುಷಿ
ತೊಟ್ಟು ನೋಡುವ ವೇಳೆ ಜರ್ರನೆ ಇಳಿದು
ಆಮೇಲೆ ನಡೆದದ್ದೆಲ್ಲ ನಿಷ್ಕಲ್ಮಶ ಪ್ರತಿಭಟನೆ
ಯಾವ ಆಮಿಷಕ್ಕೂ ಬಗ್ಗದ್ದು

ಸೊಂಟದಳತೆಯೊಂದೇ ಹೊಂದುತ್ತಿದ್ದ
ಆ ಚಡ್ಡಿ ತೊಟ್ಟ ಹುಡುಗ
ಅಂಕೋಲೆಯೇ ಹುಸಿಯೆನ್ನಿಸಿ
ಛಾವಣಿಯಿಂದೀಚೆ ಇಣುಕಿದ ಇಲಿ ಹಂಗಿಸಿ
ಭಗ್ನಾವಶೇಷಗಳ ನಟ್ಟ ನಡುವೆ ತಬ್ಬಲಿ

ಅತ್ತೂ ಕರೆದೂ ರಾತ್ರಿಯೆಲ್ಲ ಸೋರಿ
ಕಡೆಗೂ ಗೆದ್ದದ್ದು
ಪ್ರೀತಿಯಿಂದ ಸೋತ ಅಪ್ಪ

ಕಣ್ಣಲ್ಲಿ ಸಮುದ್ರ
ಮಗನಿಗಿಂತ ದೊಡ್ಡದೇನಿದೆ ಎಂಬ
ಹಾಯಿದೋಣಿಗೆ ಹಿತ ತಂಗಾಳಿ
ಭದ್ರ ಅಪ್ಪುಗೆ

ಎದೆಯ ಕಣ್ಣ ಮಿಂಚಿನ
ವಾಯುನೆಲೆ ಅಂಕೋಲೆ
ಸಿಕ್ಕೇಬಿಟ್ಟಿತು ಎನ್ನುವಾಗ

ಅಪ್ಪ
ಎದೆಯೊಳಗೇ ನಡೆದುಬಂದ

ವೆಂಕಟ್ರಮಣ ಗೌಡ

ಶ್ರೀ ಮದ್ರಾಮಾಯಣದ ಆ ಒಂದು ಹಾಳೆ

ಸಾಮಾನ್ಯ

ಲ್ಲ ಶುರುವಾದದ್ದು ಅವತ್ತು ಅಂಗಡಿಯಿಂದ ಸೇವು ಕಟ್ಟಿಸಿಕೊಂಡು ಬಂದಾಗ. ನನಗೆ ಸಣ್ಣವನಿದ್ದಾಗ ಅಂಗಡಿಯಿಂದ ಬರುವ ಪೇಪರಿನ ತುಂಡುಗಳನ್ನು ಓದುವ ಚಟ. ಅವತ್ತಂತೂ ಮೂಗಿಗೆ ಘಮ ಘಮ ಅಡರುವಂತಿದ್ದ ಸೇವು ಕಟ್ಟಿಸಿಕೊಂಡು ತಂದಿದ್ದ ಆ ಹಾಳೆ ವಿಶೇಷವಾಗಿ ನನ್ನ ಮನಸ್ಸನ್ನು ಸೆಳೆದಿತ್ತು. ಕೇಸರಿ ಬಣ್ಣದ ರಂಗೋಲಿಯಂಥ ಗೆರೆಯಿಂದ ಪುಟದ ಅಂಚನ್ನು ಅಲಂಕರಿಸಲಾಗಿದ್ದ ಆ ಹಾಳೆಯನ್ನು ಓದತೊಡಗಿದೆ. ಮೊದಲು ದಪ್ಪಕ್ಷರಗಳಲ್ಲಿ ಶ್ಲೋಕ. ಅದು ನನಗೆ ಅರ್ಥವಾಗದ ಭಾಗವಾಗಿತ್ತು. ಅದಾದ ಬಳಿಕ ಪುಟದ ಮುಕ್ಕಾಲು ಭಾಗದಲ್ಲಿ ನಾನು ಆಗಿನ ನನ್ನ ಶಕ್ತಿಯ ಮಿತಿಯಲ್ಲಿ ಕೊಂಚವಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದಾಗಿದ್ದ ಗದ್ಯವಿತ್ತು. ಅಲ್ಲಿಯವರೆಗೆ ಕೇಳಿ ತಿಳಿದುಕೊಂಡ ಹಿನ್ನೆಲೆಯಲ್ಲಿ ಅದು ರಾಮಾಯಣದ ಕಥೆಯೆಂದು ನನಗೆ ಗೊತ್ತಾಯಿತು. ಎಲ್ಲೋ ನಡುದಾರಿಯಿಂದ ಶುರುವಾಗಿ, ಮುಂದಿನ ಕಥೆಗಾಗಿ ಕಾತರಿಸುತ್ತಿದ್ದ ನನ್ನನ್ನು ಮತ್ತೆ ಅತಂತ್ರ ಸ್ಥಿತಿಯಲ್ಲಿ ಕೈಬಿಟ್ಟ ಆ ಹಾಳೆ ಹಿಡಿದುಕೊಂಡು ಸೀದಾ ಅಂಗಡಿಗೆ ಓಡಿದೆ. ಆ ಇಡೀ ಪುಸ್ತಕವೇ ಸಿಗಬಹುದೇನೋ ಎಂಬ ಆಸೆ. ಹೋಗಿ ನೋಡಿದರೆ ಅಂಗಡಿಯವನು ಅಂಥದೇ ಹಾಳೆಯೊಂದನ್ನು ಹರಿದು ಮತ್ತಾರಿಗೋ ಏನನ್ನೋ ಕಟ್ಟಿಕೊಡುತ್ತಿದ್ದ. ನಾನು ನನ್ನ ಕೈಯಲ್ಲಿದ್ದ ಹಾಳೆ ತೋರಿಸಿ, ಆ ಪುಸ್ತಕವಿದ್ದರೆ ಕೊಡುತ್ತೀರಾ ಕೇಳಿದೆ. ಅದಕ್ಕವನು ರದ್ದಿ ಪೇಪರ್ ಕೊಟ್ಟರೆ ಕೊಡುತ್ತೀನಿ ಎಂದ. ಮತ್ತೆ ಮನೆಗೆ ಓಡಿಬಂದೆ. ಗುಟ್ಟಾಗಿ ತಡಕಾಡಿ ಒಂದಿಷ್ಟು ಪೇಪರ್ ಸೇರಿಸಿಕೊಂಡು, ಬಂದಷ್ಟೇ ಧಾವಂತದಿಂದ ಮರಳಿ ಅಂಗಡಿಗೆ ಹೋದೆ. ಕಡೆಗೂ, ಕೆಂಪು ಬಣ್ಣದ ರಟ್ಟಿನ ಕವರ್ ಇದ್ದ ಆ ಪುಸ್ತಕ ಸಿಕ್ಕಾಗ ಆಕಾಶವೇ ಕೈಗೆ ಬಂದಷ್ಟು ಖುಷಿಯಾಗಿತ್ತು. ಪುಸ್ತಕದ ಬೈಂಡಿನ ಮೇಲೆ, ಶ್ರೀ ವಾಲ್ಮೀಕಿ ವಿರಚಿತ ಶ್ರೀ ಮದ್ರಾಮಾಯಣ ಎಂದಿತ್ತು.

ಅದನ್ನು ಅಡಗಿಸಿಟ್ಟುಕೊಂಡು ಮನೆಯೊಳಗಡೆ ತಂದದ್ದೇ ಒಂದು ಸಾಹಸ. ಅಮ್ಮ ಕಂಡರೆ ಎಲ್ಲಿಂದ ತಂದೆ, ಏನು ಕೊಟ್ಟು ತಂದೆ ಎಂಬೆಲ್ಲ ಪ್ರಶ್ನೆಗಳನ್ನೆದುರಿಸಬೇಕಾಗುತ್ತದೆ ಎಂಬುದು ಗೊತ್ತಿತ್ತು. ಆಗತ್ಯ ಬಿದ್ದಾಗ ನಾಲ್ಕು ಕಾಸು ಸಿಗುತ್ತದೆ ಎಂದು ಅಮ್ಮ ಸಂಗ್ರಹಿಸಿಟ್ಟಿದ್ದ ರದ್ದಿ ಕಾಗದ ಕೊಟ್ಟು ತಂದದ್ದು ಗೊತ್ತಾದರೆ ಸರಿಯಾಗಿ ಪೆಟ್ಟು ತಿನ್ನಬೇಕಾಗುತ್ತದೆ ಎಂಬ ಆತಂಕವೂ ಕಾಡುತ್ತಿತ್ತು. ಸದ್ಯ ಅಮ್ಮನ ಕಣ್ಣಿಗೆ ಬೀಳಲಿಲ್ಲ ಎಂಬ ಖುಷಿಯಲ್ಲೇ, ಮೊದಲಿನ ಹಲವಾರು ಪುಟಗಳನ್ನು ಕಳೆದುಕೊಂಡಿದ್ದ ಆ ಪುಸ್ತಕ ಓದಲು ಶುರು ಮಾಡಿದೆ. ಮುಂದಿನ ಹಲವಾರು ದಿನಗಳವರೆಗೆ ಅದೇ ನನ್ನ ಸಂಭ್ರಮವಾಯಿತು. ಆದರೆ, ಕಥೆ ಕೈಗೆ ಸಿಗುತ್ತಿದೆ ಅನ್ನಿಸುವಾಗಲೇ ಮುಂದಿನ ಪುಟಗಳು ನಾಮಾವಶೇಷವಾಗಿರುತ್ತಿದ್ದುದು ಗೊತ್ತಾಗಿ ಸಂಕಟವಾಗುತ್ತಿತ್ತು. ಕಥೆ ಕೈತಪ್ಪಿಹೋಗುತ್ತಿತ್ತು. ಮತ್ತೆ ಇರುವ ಪುಟಗಳ ಆಸರೆಯಲ್ಲಿ ಕಥೆಯನ್ನು ಹಿಡಿಯುವ ಉಮೇದು. ಓದು ಮುಂದುವರಿಯುತ್ತಿದ್ದ ಹಾಗೆಯೇ ಮತ್ತೆ ಅದೇ ಸಂಕಟ. ಮಾಯವಾಗಿರುವ ಪುಟಗಳ ದೆಸೆಯಿಂದ ನಿರಾಸೆ. ಅಂತೂ ಇಲ್ಲದ ಪುಟಗಳ ಕಾರಣದ ದುಃಖ ಮತ್ತು ಇರುವ ಪುಟಗಳ ಸೊಗಸಿನಲ್ಲಿ ನನ್ನೊಳಗೆ ತುಂಬಿಕೊಳ್ಳುತ್ತಿದ್ದ ಸುಖದಲ್ಲೇ ವಾಲ್ಮೀಕಿ ರಾಮಾಯಣದ ಸುಳಿವುಗಳನ್ನು ಹಿಡಿದುಕೊಂಡಿದ್ದೆ.

ಇದಾದ ಬೆನ್ನಲ್ಲೇ ಅದೊಂದು ದಿನ ಅಮ್ಮನಿಗೆ ತಾನು ತೆಗೆದಿಟ್ಟಿದ್ದ ರದ್ದಿ ಕಾಗದಗಳು ಮಾಯವಾಗಿರೋ ವಿಚಾರ ತಿಳಿದುಹೋಗಿತ್ತು. ಶುರುವಾಯಿತು ನನ್ನ ವಿಚಾರಣೆ. ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಒಪ್ಪಿಕೊಂಡ ಮೇಲೂ ಶಿಕ್ಷೆಯಲ್ಲಿ ಯಾವ ರಿಯಾಯಿತಿಯೂ ಸಿಗಲಿಲ್ಲ. ಅಮ್ಮನ ಸಂಕಟ, ಅದರ ಕಾರಣದಿಂದ ಹುಟ್ಟಿದ ಅವಳ ಸಿಟ್ಟು ನನ್ನ ಮೈಮೇಲೆ ಬಾಸುಂಡೆ ಮೂಡಿಸಿದ್ದವು. ಆದರೆ, ಅದೇ ಅಮ್ಮ ನಾನು ಬೆಂಗಳೂರಲ್ಲಿ ಕೆಲಸಕ್ಕೆ ಸೇರಿದ ಹೊತ್ತಲ್ಲಿ ಊರಿಗೆ ಅಪರೂಪಕ್ಕೊಮ್ಮೆ ಹೋದಾಗಲೆಲ್ಲ ಅಲ್ಲಿದ್ದ ನನ್ನ ಪುಸ್ತಕಗಳ ರಾಶಿಯಲ್ಲಿ ಪ್ರತಿಸಲವೂ ಒಂದಿಷ್ಟನ್ನು ಬ್ಯಾಗಿಗೆ ಹಾಕಿಕೊಂಡು ಬರುವುದನ್ನು ನೋಡುವಾಗ ಕಣ್ಣೀರು ಹಾಕುತ್ತಿದ್ದಳು. ಇಲ್ಲಿರುವ ಪುಸ್ತಕಗಳೆಲ್ಲ ಖಾಲಿಯಾಗಿಬಿಟ್ಟರೆ ಮಗ ತಮ್ಮಿಂದ ದೂರವಾಗಿಬಿಡುತ್ತಾನೆ ಎಂಬ ವೇದನೆಯಲ್ಲಿ ಹಾಕುತ್ತಿದ್ದ ಕಣ್ಣೀರಾಗಿತ್ತು ಅದು. ಅದೆಷ್ಟು ದಿನಗಳಿಂದ ತಡೆದಿದ್ದಳೊ, ಅದೊಂದು ದಿನ ತನ್ನ ಮನಸ್ಸಲ್ಲಿ ಏಳುತ್ತಿದ್ದ ಸಂಕಟವನ್ನು ಅವಳು ಅಳುತ್ತಳುತ್ತಲೇ ನನ್ನೆದುರು ಇಟ್ಟಿದ್ದಳು. ಮೌನವಾಗಿಯೇ ಎಲ್ಲವನ್ನೂ ನುಂಗಿಕೊಳ್ಳಬಲ್ಲವಳಾಗಿದ್ದ ನನ್ನಮ್ಮನೊಳಗೆ ಅಂಥದೊಂದು ಸಂಕಟ ಕುದಿಯುತ್ತಿರುವುದು ತಿಳಿದ ಆ ಘಳಿಗೆ ನಾನು ತತ್ತರಿಸಿಹೋಗಿದ್ದೆ. ಮತ್ತೆ ಯಾವತ್ತೂ ನಾನು ಬೆಂಗಳೂರಿಗೆ ಬರುವಾಗ ಮನೆಯೊಳಗಿದ್ದ ಪುಸ್ತಕಗಳನ್ನು ತರಲಿಲ್ಲ. ಅಮ್ಮನ ಸಮಾಧಾನಕ್ಕಾದರೂ ಅವು ಅಲ್ಲಿರಲಿ ಎಂದುಕೊಂಡೆ.

ಇವತ್ತು ಅಮ್ಮ ಇಲ್ಲ. ರದ್ದಿಪೇಪರಿನ ಸಲುವಾಗಿ ಅಮ್ಮ ನನ್ನನ್ನು ಹೊಡೆಯಲು ಕಾರಣವಾಗಿದ್ದ ವಾಲ್ಮೀಕಿ ರಾಮಾಯಣ ಪುಸ್ತಕ, ಮಗ ದೂರವಾಗುತ್ತಿದ್ದಾನೆ ಎಂಬ ಆತಂಕದಲ್ಲಿ ಕಣ್ಣೀರಾದ ಅಮ್ಮನ ಮುಖ ಕಾಡುವಾಗಲೂ ನೆನಪಿಗೆ ಬರುತ್ತದೆ. ಪುಟಗಳ ಕಣ್ಣಾಮುಚ್ಚಾಲೆಯಾಟದಿಂದಲೇ ರಾಮಾಯಣ ಬಿಡಿಸಿಟ್ಟ ಆ ಪುಸ್ತಕ ಕೂಡ ಇವತ್ತು ನನ್ನ ಬಳಿ ಇಲ್ಲ.

ವೆಂಕಟ್ರಮಣ ಗೌಡ

‘ಚುಕ್ಕು-ಬುಕ್ಕು’ ಪ್ರಕಟಿತ

ಅಂಕೋಲೆ – 2

ಸಾಮಾನ್ಯ

ಯಾವಾಗ ನೋಡಿದರೂ ಲಹರಿ ತೋರಿಸುತ್ತ
ಉದ್ಧಟ ನೋಟದಿಂದಿರಿಯುತ್ತ ನಮ್ಮನ್ನೇ
ಕಿಚಾಯಿಸುವಂತೆ ವಿಹರಿಸುತ್ತಿದ್ದ ಇಲಿಗಳು

ಹುಲ್ಲು ಛಾವಣಿಯ ಮನೆಯೊಳಗಿನ ಈ ಮಹಾಭಾರತ
ನೋಡಿ ನೋಡಿ ರೋಸಿದ್ದ ನಮ್ಮ ಕಲ್ಪನೆಯಲ್ಲಿ
ಕಿಂದರಿ ಜೋಗಿಯಾಗಿ ಬೆಳೆದಿತ್ತು ಅಂಕೋಲೆ

ಟಾರು ರಸ್ತೆಯ ಬುರುಬುರು ಕಾರು ಮೋಟಾರುಗಳ
ಬರೀ ಜನನಿಬಿಡ ಭೂಗೋಳವಾಗಿರಲಿಲ್ಲ;
ನಮ್ಮ ಮನದ ರಮಣೀಯತೆಯನ್ನೇ
ಎರೆದು ಪೋಷಿಸಿದ್ದೆವಲ್ಲ

ಕಂಗೊಳಿಸುತ್ತಿತ್ತು ಅಂಕೋಲೆ
ಕೇಳಿ ಗೊತ್ತಿದ್ದ ಮೈಸೂರರಮನೆ ಥರ

ಅರಮನೆಯಂಥ ಅಂಕೋಲೆ
ಮಲಗಿದರೆ ಬರೀ ಅಂತಃಪುರದ ಸದ್ದು
ನಮಗೂ ರಾಜನ ಪೋಷಾಕು
ಹಳೇ ಅಂಗಿ ಚಡ್ಡಿ ತೆಗೆದು ಬೀಸಾಕು
ಬೆಳಗ್ಗೆ ಹಾಸಿಗೆಯಿಂದೆದ್ದರೆ
ಮಕ್ಕಳೆಲ್ಲ ಬೆತ್ತಲೆ ರಾಜರೇ

ಈಗ ಕನಸುಗಳ ಸುಖದ ಹಂಗೆಲ್ಲ ಮುಗಿದು
ಸೀದಾ ಅಂಕೋಲೆಗೇ ಹೊರಟು ನಿಂತಾಗಿತ್ತು ಖುದ್ದು
ಹುಲ್ಲಿನರಮನೆ ಹುಡುಗನ ಮುಖದಲ್ಲಿ ರಾಜಕಳೆ
ಅಂತಃಪುರದೊಳಗೂ ಸದ್ದೇರಿತು ಆಗಲೇ

ಗೋಳಾಡುತ್ತಿದ್ದಳು ಯುವರಾಜನ ತಾಯಿ
‘ಯಾಕವ್ವ ಅಳ್ತೀ?’ ಎಂದು ಕೇಳಿದ
ಹುಡುಗನ ಗಂಟಲೂ ಕಟ್ಟಿಬಂದಿತ್ತು
ಮುಂದೆ ಸಾಗಲಿಲ್ಲ ಮಾತು

ಅಪ್ಪನ ಕಣ್ಣಲ್ಲೂ ನೀರು; ಆದರೂ ಗಟ್ಟಿ ಮನಸ್ಸು
ಸಂಭಾಳಿಸಬಲ್ಲ ಯಜಮಾನ
ಅಂಕೋಲೆಯ ಕನಸಿಗೆ ಬಾಗಿಲು ತೆರೆದುಕೊಟ್ಟು
ತಾನು ಬೆನ್ನಿಗೆ ನಿಂತಿದ್ದ

ಹಾಗೆ ಅವತ್ತು
ಗೋಕುಲ ನಿರ್ಗಮನ ಆಯಿತು

ವೆಂಕಟ್ರಮಣ ಗೌಡ

ಅಂಕೋಲೆ

ಸಾಮಾನ್ಯ

ಲ್ಲಿಂದ ಶುರುವಾಯಿತು
ಅಂಕೋಲೆ?

ಬೆಟ್ಟದ ಸೆರಗು ಹಿಡಿದು ನಡೆವಾಗ
ಕಿರುದಾರಿಯಲ್ಲಿ ಕಂಡ ಕನಸು
ಅದೆಷ್ಟು ವರ್ಷಗಳ ತಪಸ್ಸು!

ಪೇಟೆಯಿಂದ ಬರುವ
ಸರೀಕ ಹುಡುಗರ ಮುಂದೆ
ಅವಮಾನದಿಂದ ತೊಯ್ದು ತೊಪ್ಪೆಯಾಗಿ
ನಿಂತ ಘಳಿಗೆಯಲ್ಲೇ
ಒಳಗೆ ಒದೆಯುತ್ತಿತ್ತು ಅಂಕೋಲೆ

ನಾವೆಲ್ಲ ಹಳ್ಳಿ ಗುಗ್ಗುಗಳು, ಪೆದ್ದರು
ಅದೂ ಆಗಿರದ ಅವರು ಪ್ರತಿ ಮಾತು ನೋಟದಲ್ಲೂ ತಿವಿದರು
ಉರಿದುರಿದು ಬಿದ್ದೆವು ದೂರವಿತ್ತು ಅಂಕೋಲೆ

ಕಾಲು ಸುಡುವ ಬೆಣಚುಗಲ್ಲುಗಳ
ಶಾಲೆಯ ರಸ್ತೆಯನ್ನೂ ಯಕ್ಷಗಾನಕ್ಕೆ
ವೇದಿಕೆ ಮಾಡಿಕೊಳ್ಳಬಲ್ಲ ನಮ್ಮ ತಾಕತ್ತು
ಪೇಟೆಯ ಉಂಡಾಡಿ ಗುಂಡರಿಗೇನು ಗೊತ್ತಿತ್ತು?
ಆದರೂ ಅವರ ಕಣ್ಣ ತೀಕ್ಷ್ಣತೆಗೆ
ಸೋತಿದ್ದೆವು; ಹಳಹಳಿಸಿ ದಕ್ಕಿರದ ಅಂಕೋಲೆಗೆ

ಅಪರೂಪಕ್ಕೊಮ್ಮೆ ಅಜ್ಜನೊ ಅಜ್ಜಿಯೊ
ಅಥವಾ ಅಂಕೋಲೆಯ ನೆಂಟರು ಇನ್ನಾರೋ
ಬರುವಾಗ ತರುತ್ತಿದ್ದ ಬೆಂಡು ಬತ್ತಾಸು
ನಾಲಿಗೆಯ ಮೇಲೆ ಬೆರಗನ್ನಿಳಿಸುತ್ತಿತ್ತು
ಅವತ್ತು ಮತ್ತು ಅನಂತರದ ಮೂರ್ನಾಲ್ಕು ದಿನ
ಸಿಕ್ಕಾಪಟ್ಟೆ ಕಳೆಗಟ್ಟುತ್ತಿತ್ತು
ಶಾಲೆ ದಾರಿಯ ನಮ್ಮ ಯಕ್ಷಗಾನ

ತೆಂಗಿನೆಣ್ಣೆ ಹಚ್ಚಿ
ಕೂದಲು ಬಾಚಿಕೊಳ್ಳಲು ಕಲಿತಿದ್ದರೂ
ಕಾಲಲ್ಲಿ ಚಪ್ಪಲಿ ಮೆಟ್ಟಿರಲಿಲ್ಲ
ಅದು ಬಂದ ದಿನ ಪೇಟೆಯ ವೈಭೋಗವೇ ಬಂದು
ಕಾಲಿಗೆ ತೊಡರಿದಂತಾಗಿ ಖುಷಿಯ ಹಳ್ಳದಲ್ಲಿ ಮಿಂದು

ಸ್ಕೂಲಿಗೆ ಹೋಗುವಾಗ ಮೆಟ್ಟಿ ನಡೆದದ್ದಷ್ಟೇ
ಬರುವಾಗ ಮತ್ತೆ ಬರಿಗಾಲೇ; ಚಪ್ಪಲಿ ಅಲ್ಲೇ
ವರ್ಷಗಳ ರೂಢಿ
ಯ ಮುಂದೆ ವೈಭೋಗವೂ
ಒತ್ತಲಾಗಿರಲಿಲ್ಲ ಛಾಪು

ಬಿಟ್ಟುಬಂದಿದ್ದ ಚಪ್ಪಲಿಗಾಗಿ
ಎದೆಯಲ್ಲೆದ್ದ ಆತಂಕದ ಸುಳಿಗಾಳಿ ಶಾಂತವಾದದ್ದು
ಅಂತೂ ಅಲ್ಲೇ ಅದು ಇದೆಯೆಂದು ಖಾತ್ರಿಪಡಿಸಿಕೊಂಡಾಗಲೇ
ಮತ್ತೆ ಬರಿಗಾಲಲ್ಲೇ ಶಾಲೆಗೆ ನಡೆದು

ಇಂಥ ಹಲವು ತಲ್ಲಣಗಳ ಹೈಯರ್ ಪ್ರೈಮರಿಯನ್ನು
ಪಾಸು ಮಾಡಿದಾಗ ಹೈಸ್ಕೂಲಿಗೆ ಮಣ್ಣು
ಹೊರಬಲ್ಲ ಯೋಗ್ಯತೆಯ ಮಾರ್ಕುಗಳ ಬಲದೊಂದಿಗೆ

ಕೈಗೂಡಿತ್ತು ಅಂಕೋಲೆ
ಕನಸಿಂದ ನೇರ ಜಿಗಿದು ಕಣ್ಣೆದುರಿಗೆ

ವೆಂಕಟ್ರಮಣ ಗೌಡ

ಮೋಸವಾಯಿತೇನೆ ರಾಧೆ?

ಸಾಮಾನ್ಯ

ಮೋಸವಾಯಿತೇನೆ ರಾಧೆ?

ಎದೆಯಾಳದ ಕಳವಳ ಬಚ್ಚಿಟ್ಟು ಕೇಳಿದರೂ ತಲ್ಲಣಿಸಿಯಾಳು
ಗೋಕುಲದ ಬಳುಕು ಬಳ್ಳಿ, ಘಮಘಮ ಸಂಪಿಗೆ, ಪ್ರೇಮ ಸರೋವರದ ತರಂಗ
ತಾನೊಪ್ಪಿದ ಬದುಕು ಹುಸಿಯುವುದುಂಟೆ?

ಎಷ್ಟು ಶುದ್ಧ ದನಿಯಲ್ಲದ್ದಿ ತೆಗೆದಂತೆ ಕಂಡರೂ ಮಾತು
ಯಾಕೊ ಭಾರ! ರಾಧೆಯ ಜಗದಲ್ಲಿ ಆಡುವ ಗೋಪಿಕೆಯರ ಮನದ ತುಂಬಾ ಎಂಥದೋ ಮಂಕು
ಬರುವನೆ ಕೃಷ್ಣ, ಕನಸ ತರುವನೆ ರಾಧೆಯ ಸಿರಿ ಮಡಿಲಿಗೆ?

ನಿಜವಲ್ಲ ಕೃಷ್ಣ ಎನ್ನಿಸುವುದು; ದಿಗಿಲು ಎದೆಗೊದೆಯುವುದು.

ಮಧುರೆಗೆ ಹೊರಟ ಕೃಷ್ಣನ ಜತೆಗೆ ಕೊಳಲೇ ಇಲ್ಲ-
ವೆಂದ ಮೇಲೆ ನವಿಲುಗರಿಯೂ ಸತ್ಯವಲ್ಲ.
ಕಾಡುವುದು ಅನುಮಾನ. ರಾಧೆಯೊಳಗೆ ಮಾತ್ರ ಆಗಷ್ಟೇ ಕರೆದ ಹಾಲ ನೊರೆಯ ಸದ್ದು!

ಮೆಚ್ಚಿ ಮುಡಿದನೆ ಕೃಷ್ಣ
ಅವಳ ನೆನಪಾಗಿ ನವಿಲುಗರಿಯ?
ಮೆಚ್ಚಿಸಲೆಂದೇ ಆಡಿದನೆ ಕಪಟವ?
ಮತ್ತೆ ಕೇಳುವುದು ರಾಧೆಗಾಗಿ ನೋಯುವ ಜೀವ
ರಾಧೆಯ ಕಣ್ಣುಗಳು ಚಿಂತೆ ಸೂಸದೆ ನೆಟ್ಟಿವೆ ಅದೋ
ಅಲ್ಲಿ ಗೋಕುಲಕ್ಕೆ ಗಡಿಯ ಹಂಗಿಲ್ಲ. ಕೃಷ್ಣ ಗೋಕುಲ ತೊರೆದದ್ದೇ ಸುಳ್ಳು!

ಆದರೂ ಆದರೂ ನಿಜವಲ್ಲ ಕೃಷ್ಣ ಎನ್ನಿಸುವುದು; ದಿಗಿಲು ಎದೆಗೊದೆಯುವುದು.

ಮೋಸವಾಯಿತೇನೆ ರಾಧೆ?

ಕೇಳದಿರುವುದೆ ಸೊಗಸು. ಬರುವುದು ಬೇಡ ಅವಳ ಕಣ್ಣಲ್ಲಿ ನೀರು
ಗೋವುಗಳು ವಿರಮಿಸುವ ತಂಪಿನಲ್ಲಿ ಬೇಡ ವಿರಹದ ನಿಟ್ಟುಸಿರು!

ವೆಂಕಟ್ರಮಣ ಗೌಡ

ಮಗಳು – 2

ಸಾಮಾನ್ಯ

ಪುಟ್ಟ ಕಾಲುಗಳಿಂದೊದೆದು ಎದೆಗೆ
ಪುಟಿವ ಸಂಭ್ರಮ ನೀನು ಮಗಳೆ
ನಮ್ಮ ಪ್ರತಿ ಕ್ಷಣವೂ ಬೆಳಗುವುದು
ನೀನು ಕೊಡುವ ಬಣ್ಣಗಳಲ್ಲೆ

ಈ ಪುಟ್ಟ ಪುಟಾಣಿ ಬೆರಳುಗಳಲ್ಲಿ
ಅದೆಷ್ಟು ಕಥೆಗಳಿವೆ ಹೇಳು ಮಗಳೆ
ಹೊದಿಕೆಯಿಂದಿಣುಕಿಸಿ ಹೂಪಾದಗಳನ್ನು
ನೀ ನುಡಿಯುತ್ತಿರುವ ಹಾಡು ಏನು ಮಗಳೆ?

ದಿಕ್ಕುಗಳೆಲ್ಲ ಬಾಗಿ ಕಿರಣಗಳು ತೂಗಿ
ಮತ್ತೆ ಮತ್ತೆ ಮುದ್ದಾಟ ನಿನ್ನ ನಗುವಿನ ಜೊತೆಗೆ
ಹಾಲುಗೆನ್ನೆಯ ಮೇಲೆ ಜೊಲ್ಲು ಚಿತ್ತಾರದ ಲಜ್ಜೆ
ನಿದ್ದೆಯ ದಂಡೆಯಲ್ಲಿ ಕನಸು ಕಾತರಿಸುವ ಹಾಗೆ

ಕೈಯೆತ್ತಿ ಒತ್ತಾಯಿಸುತ್ತಿ ಎತ್ತಿಕೊಳ್ಳುವುದಕ್ಕೆ
ನಕ್ಷತ್ರಗಳು ಸುತ್ತ ಬಂದು ಕೂತುಬಿಡುತ್ತವೆ
ಎತ್ತಿ ತೂಗಲು ಎಷ್ಟೊಂದು ಕೈಗಳು ಹಂಬಲಿಸುತ್ತ
ನಿನ್ನೊಂದು ನೋಟಕ್ಕೇ ಗೆಲುವಾಗುತ್ತವೆ

ಎಣ್ಣೆಯುಜ್ಜಿ ನುಣ್ಣಗಿನ ಮೈಗೆ ಹದ ಬಿಸಿನೀರು
ಹೊಯ್ದು ಮೀಯಿಸಿ ಪೌಡರು ಪೂಸಿ ಕಾಡಿಗೆ ಹಚ್ಚಿ
ಖುಷಿಯ ಸೀಮೆಗಳ ಹಿಗ್ಗಿಸುವುದು ನೋಡಬೇಕು
ಮೊಮ್ಮಗಳು ನಿನ್ನ ಆಡಿಸುತ್ತ ಅಜ್ಜಿ

ಸೋಲು ಸಂಕಟ ದುಗುಡ; ಆಸೆ ನಡುನಡುವೆ ಅಲ್ಲೇ
ಬಂದು ಮಿನುಗಿದವಳು ನೀನು ಮೊಗ್ಗು ನಕ್ಕಂತೆ
ತಕರಾರುಗಳ ಗುದ್ದಾಟದಲ್ಲೇ ಕಟ್ಟಿ ಹೊಸ ಸೂತ್ರ
ಸಿದ್ಧವಾದೆವು ನಾವು ನಮಗೇ ಗೊತ್ತಿಲ್ಲದಂತೆ

ಮನೆಯೊಳಗಿನ ಘಮ ನೀನು ಈ ಮನದ ಸೌಭಾಗ್ಯ
ಅಪರಿಚಿತ ಪುಳಕಗಳ ಕಣ್ಣ ಸನ್ನೆ
ದೊಡ್ಡವರ ಹೊಯ್ದಾಟಗಳನ್ನೆಲ್ಲ ಹಿಡಿದು ಮಣಿಸಿ
ಕ್ಷೀರಪಥ ಕಾಣಿಸುವೆ ನೀನೆ ತಾನೆ?

ವೆಂಕಟ್ರಮಣ ಗೌಡ

ಇಲ್ಲಿ

ಸಾಮಾನ್ಯ

ಗೋಡೆ ಕಟ್ಟುತ್ತಾ ಹೋಗುವವರು
ಕಥೆ ಹೇಳುವುದಿಲ್ಲ
ರಕ್ಕಸರು ನುಗ್ಗಿದರೂ ನುಗ್ಗಬಹುದು
ಎಂಬ ಭಯವನ್ನು ಮಾತ್ರ ಅಲ್ಲಲ್ಲಿ ಇಡುತ್ತಾ
ಎದುರಿನವರ ಮುಖ ನೋಡುತ್ತಾರೆ

ರಕ್ಕಸರೆಂದರೆ ನಡುಗುವವರು
ಕಿಟಕಿ ಬಾಗಿಲುಗಳೇ ಬೇಡ ಎಂದು
ಕೋಟೆಯ ನಡುವೆ ಸ್ವಯಂ ಬಂಧಿಗಳಾಗುತ್ತಾರೆ

ಮನುಷ್ಯರು ಗುಳೆಹೋಗುವುದನ್ನು
ತಡೆಯುವವರು ಕಥೆ ಹೇಳಬಲ್ಲವರು ಮಾತ್ರ
ಕಥೆಗಳು ಆಳತೊಡಗಿದರೆ
ಗೋಡೆಗಳ ನಡುನಡುವೆ ಬಾಗಿಲು ಕಿಟಕಿಗಳು
ನಗು ಸೂಸುತ್ತ, ಸೂರಿಗೂ ಊರಿಗೂ ಅರ್ಥ

ಆಗ ಕಲೆಗಾರರು ಬಂದು ಗೋಡೆಗಳ ಮೇಲೆ
ತಾಯಾಗುವವರ ಹೆಸರು ಬರೆಯುತ್ತಾರೆ
ಹುಟ್ಟಲಿರುವ ಕಂದಮ್ಮಗಳ ಹೆಸರು
ಹೆಣೆಯುತ್ತ ಹಾಡು ಕಟ್ಟುತ್ತಾರೆ

ಕೋಟೆಯಿಂದ ಕನಸುಗಳ ಬಯಲಿಗೆ
ನಡೆದುಬಿಡುವುದು ಎಷ್ಟೊಂದು ಸುಲಭ ಹೀಗೆ
ಸುಲಭವಲ್ಲದ್ದು ಅಂದುಕೊಂಡ ತಕ್ಷಣ
ಎಲ್ಲ ಬಿಟ್ಟು ಹೊರಟುಬಿಡಬಲ್ಲ ಸಂತಗುಣ

ವೆಂಕಟ್ರಮಣ ಗೌಡ